ಪುನರುತ್ಪತ್ತಿ - 
ಜೀವಿಗಳು ಆಕಸ್ಮಿಕಗಳಿಂದ ಕಳೆದುಕೊಂಡ ಅಂಗಗಳನ್ನು ಮತ್ತೆ ಬೆಳೆಸಿಕೊಳ್ಳುವ ಕ್ರಿಯೆ (ರೀಜನರೇಷನ್).  ಎಲ್ಲ ಜೀವಿಗಳಲ್ಲೂ ಈ ಸಾಮಥ್ರ್ಯ ಉಂಟು.  ಆದರೆ ವಿವಿಧ ಪ್ರಮಾಣಗಳಲ್ಲಿ ಕೆಲವು ಪ್ರಭೇದಗಳಲ್ಲಿ ಜೀವಿಯ ಕೆಲವೇ ಕೋಶಗಳು, ಇಡೀ ಜೀವಿಯನ್ನು ಪುನರುತ್ಪತ್ತಿ ಮಾಡಬಲ್ಲವು.  ಇನ್ನು ಕೆಲವಲ್ಲಿ ದೇಹದ ಒಂದು ಅಂಗವನ್ನು ಪಡೆದುಕೊಳ್ಳುವ ಮಟ್ಟಿಗೆ ಮಾತ್ರ ಈ ಸಾಮಥ್ರ್ಯ ಸೀಮಿತ.  ಪುನರುತ್ಪತ್ತಿ ಕ್ರಿಯೆ ಜೀವಿಗಳ ಬೆಳವಣಿಗೆ ಹಾಗೂ ಪರಿವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಸಿಹಿ ನೀರಿನಲ್ಲಿ ಬೆಳೆಯುವ ಹೈಡ್ರ ಎಂಬ ಪ್ರಾಣಿಯಲ್ಲಿ ಈ ಕ್ರಿಯೆಯ ಪರಾಕಾಷ್ಠೆಯನ್ನು ಕಾಣಬಹುದು.  ಅಬ್ರಹಾಮ್ ಟ್ರೆಂಬ್ಲೆ ಎಂಬಾತ ಹೈಡ್ರಾದಲ್ಲಿ ಪುನರುತ್ಪತ್ತಿ ಕ್ರಿಯೆಯನ್ನು ಪ್ರಥಮ ಬಾರಿಗೆ ಗುರುತಿಸಿದ (1740).  ಹೈಡ್ರವನ್ನು ಇಬ್ಭಾಗ ಮಾಡಿದರೆ ಎರಡು ಭಾಗಗಳೂ ಪರಿಪೂರ್ಣ ಜೀವಿಗಳಾಗಿ ಬೆಳೆಯುವುದಲ್ಲದೆ ಜೀವಿಯ ಒಂದೊಂದು ತುಣುಕು ಇಡೀ ಜೀವಿಯನ್ನು ಪುನರುತ್ಪತ್ತಿ ಮಾಡಬಲ್ಲುದು ಎಂಬುದನ್ನು ಆತ ಸ್ಥಿರೀಕರಿಸಿದ.  ಹೀಗೆ ವರ್ಧಿಸಿದ ಇವುಗಳಿಗೆ ಪ್ರಜನನ ಕ್ರಿಯೆಯೂ ಸೇರಿದಂತೆ ಬದುಕಿನ ಎಲ್ಲ ಕ್ರಿಯೆಗಳನ್ನು ನಿರ್ವಹಿಸುವ ಸಾಮಥ್ರ್ಯವಿರುವುದು.  

ಟ್ರೆಂಬ್ಲೆಯ ಮೂಲ ಪರಿಶೋಧನೆಗಳಿಂದ ಪ್ರೇರಿತಗೊಂಡು, ಎಲ್ಲ ಬಗೆಯ ಜೀವಿಗಳಲ್ಲೂ ಈ ಕ್ರಿಯೆಯ ಬಗ್ಗೆ ಆಳವಾದ ಪರಿಶೋಧನೆಗಳು ಸತತವಾಗಿ ನಡೆಯುತ್ತಿವೆ.  ಏಕಾಣು ಜೀವಿಗಳಲ್ಲೂ ಪುನರುತ್ಪತ್ತಿ ಸಾಮಥ್ರ್ಯವನ್ನು ಕಾಣಬಹುದು. ಸ್ಪಂಜ್ ಪ್ರಾಣಿಯನ್ನು ಕತ್ತರಿಸಿದರೆ ಇದರ ಪ್ರತಿಯೊಂದು ಬಾಗ ಇಡೀ ಜೀವಿಯಾಗಿ ಬೆಳೆಯಬಲ್ಲದು.  ಪ್ಲನೇರಿಯಗಳಲ್ಲಿ ಪುನರುತ್ಪತ್ತಿ ಸಾಮಥ್ರ್ಯ ಪ್ರಬಲವಾಗಿದೆ.  ಲಿನಿಯಸ್ ಎಂಬ ಚಪ್ಪಟೆ ಹುಳುವನ್ನು ಚಿಕ್ಕ ಭಾಗಗಳಾಗಿ ಕತ್ತರಿಸಿದರೆ ಪ್ರತಿಯೊಂದು ಭಾಗವೂ ಇಡೀ ಜೀವಿಯಾಗಿ ರೂಪುಗೊಳ್ಳಬಲ್ಲದು.  ಎರೆಹುಳುವನ್ನು ಎರಡು ಭಾಗ ಮಾಡಿದರೆ ಒಂದೊಂದು ತುಂಡು ಉಳಿದ ಭಾಗವನ್ನು ಬೆಳೆಸಿಕೊಂಡು ಎರಡು ಪೂರ್ಣ ಜೀವಿಗಳಾಗಿ ಬೆಳೆಯುತ್ತದೆ.  ಬಸವನ ಹುಳುವಿನ ತಲೆಯನ್ನು ತುಂಡರಿಸಿದರೆ ತಲೆ ಮತ್ತೆ ಬೆಳೆಯುತ್ತದೆ.  ಕೀಟ, ಜೇಡ, ಚೇಳು ಮುಂತಾದ ಸಂಧಿಪದಿಗಳಿಗೆ ರೂಪಾಂತರದಲ್ಲಿ ತಮ್ಮ ಪಾದ ಮತ್ತು ಸ್ಪರ್ಶಾಂಗಗಳನ್ನು ಪುನರುತ್ಪತ್ತಿ ಮಾಡಿಕೊಳ್ಳುವ ಸಾಮಥ್ರ್ಯ ಇದೆ ನಿಜ.  ಆದರೆ ಈ ಸಾಮಥ್ರ್ಯ ಅತ್ಯಂತ ದುರ್ಬಲ.

ಕಶೇರುಕಗಳ ಪೈಕಿ ಯೂರೋಡೀಲ್ ಗುಂಪಿನ ಪ್ರಾಣಿಗಳಿಗೆ ಪುನರುತ್ಪತ್ತಿ ಸಾಮಥ್ರ್ಯ ಹೆಚ್ಚು.  ಟ್ರೈಟನ್ ತನ್ನ ಕಾಲುಗಳು, ಬಾಲ, ದವಡೆ ಮತ್ತು ಕಣ್ಣುಗಳನ್ನು ಪುನರುತ್ಪತ್ತಿ ಮಾಡಿಕೊಳ್ಳಬಲ್ಲದು. ಒಂದೇ ಅಂಗ ಪದೇಪದೇ ಪುನರುತ್ಪತ್ತಿಯಾಗುವುದೂ ಸಾಧ್ಯ. ಮೂರು ತಿಂಗಳೊಳಗೆ ಇದರ ಕಾಲುಗಳೂ ಬಾಲವೂ 6 ಬಾರಿ ಪುನರುತ್ಪತ್ತಿಯಾದ್ದನ್ನು ಸ್ವಲಾಂಜನೀ ಎಂಬ ವಿಜ್ಞಾನಿ ಗಮನಿಸಿದ.  ಕಪ್ಪೆಗಳಲ್ಲಿ ಪುನರುತ್ಪತ್ತಿ ಸಾಮಥ್ರ್ಯ ಬಹಳ ಕಡಿಮೆ.  ಕಪ್ಪೆಯ ಕಾಲು ಕತ್ತರಿಸಿ ಹೋದರೆ ಗಾಯ ಮಾಯಬಹುದೇ ಹೊರತು ಕಾಲು ಮತ್ತೆ ಬೆಳೆಯಲಾರದು ; ಆದರೆ ಗೊದಮಟ್ಟೆಯ ಕಾಲು ಕತ್ತರಿಸಿದರೆ ಅದು ಮತ್ತೆ ಬೆಳೆಯುತ್ತದೆ.  ದಕ್ಷಿಣ ಆಫ್ರಿಕದಲ್ಲಿ ಸಿಗುವ ಜಿನೊಪಸ್ ಎಂಬ ಕಪ್ಪೆಯಲ್ಲಿ ಮಾತ್ರ ಪ್ರಾಣಿ ಪೂರ್ಣ ಬೆಳೆದ ಮೇಲೂ ಅದರ ಪಾದಗಳನ್ನು ಪುನರುತ್ಪತ್ತಿ ಮಾಡಿಕೊಳ್ಳುವ ಸಾಮಥ್ರ್ಯ ಉಳಿದಿರುತ್ತದೆ.  ಮೀನುಗಳು ತಮ್ಮ ಈಜು ರೆಕ್ಕೆಗಳನ್ನು, ಹಲ್ಲಿ ತನ್ನ ಬಾಲವನ್ನು, ಪಕ್ಷಿಗಳು ತಮ್ಮ ಕೊಕ್ಕುಗಳನ್ನು ಪುನರುತ್ಪತ್ತಿ ಮಾಡಿಕೊಳ್ಳುತ್ತವೆ.  ಸ್ತನಿಗಳು ತಮ್ಮ ಬಾಹ್ಯಾಂಗಗಳನ್ನು ಪುನರುತ್ಪತ್ತಿ ಮಾಡಿಕೊಳ್ಳಲಾರವು.  

ಸ್ವಯಂಭೇದ (ಆಟೊಟೊಮಿ) ಪುನರುತ್ಪತ್ತಿಯ ಒಂದು ಅಂಶ.  ಹಲವಾರು ಪ್ರಾಣಿಗಳು ತಮ್ಮ ತೋಳು, ಬಾಲ ಇಲ್ಲವೇ ಇತರೆ ಅವಯವಗಳನ್ನು ತಾವಾಗಿಯೇ ಕಳೆದುಕೊಳ್ಳುವುದಕ್ಕೆ ಸ್ವಯಂಚ್ಛೇದ ಎಂದು ಹೆಸರು.  ಕಠಿಣ ಚರ್ಮಿಗಳು, ಕಂಟಕ ಚರ್ಮಿಗಳು ಮತ್ತು ಹಲ್ಲಿಗಳಲ್ಲಿ ಇದು ಸಾಮಾನ್ಯ. ಬ್ರಿಟಲ್‍ಸ್ಟಾರ್ ಪ್ರಾಣಿಯ ತೋಳನ್ನು ಹಿಡಿದರೆ ತೋಳು ತಾನಾಗಿಯೇ ಕಳಚಿ ಬೀಳುತ್ತದೆ.  ಸಮುದ್ರ ನೌಕೆಯನ್ನು ಹಿಂಸಿಸಿದರೆ ಅದು ತನ್ನ ಜೀರ್ಣಾಂಗಗಳ ಸಮೇತ ಎಲ್ಲ ಒಳಅಂಗಗಳನ್ನು ಹೊರದಬ್ಬುತ್ತದೆ.  ಅನಂತರ ಈ ಎಲ್ಲ ಅಂಗಗಳು ಪುನರುತ್ಪತ್ತಿಯಾಗುತ್ತವೆ.  ಏಡಿಯ ಕಾಲಿಗೆ ಗಾಯವಾದರೆ ಕಾಲು ತಾನಾಗಿಯೇ ಕಳಚಿ ಬೀಳುತ್ತದೆ.  ಸ್ವಯಂಭೇದ ನರ ಪ್ರಚೋದನೆಯ ಫಲವಾಗಿ ಉಂಟಾಗುವ ಪ್ರತಿಕ್ರಿಯೆ ಪ್ರಾಣಿಯ ಒಂದು ರಕ್ಷಣಾತಂತ್ರ ಮಾತ್ರವಲ್ಲದೆ ಇದು ಪುನರುತ್ಪತ್ತಿಗೆ ಸಹಾಯಕಾರಿ.  ಉದಾಹರಣೆಗೆ ಏಡಿಯಲ್ಲಿ ಮಿಕ್ಕ ಭಾಗಗಳಿಗಿಂತ ಸ್ವಯಂಭೇದ ವಲಯಗಳಲ್ಲಿ ಪುನರುತ್ಪತ್ತಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮೇಲ್ಮಟ್ಟದ ಕಶೇರುಕಗಳಲ್ಲಿ ಒಳ ಅಂಗಗಳು ಕೊಂಚ ಮಟ್ಟಿಗೆ ಪುನರುತ್ಪತ್ತಿಯಾಗಬಲ್ಲವು.  ನಾಯಿ ಮತ್ತು ಮೊಲಗಳಲ್ಲಿ ಯಕೃತ್ತಿನ ಮುಕ್ಕಾಲು ಭಾಗದಷ್ಟನ್ನು ತೆಗೆದುಹಾಕಿದರೆ ಕೆಲವು ವಾರಗಳ ಅನಂತರ ಉಳಿದ ಭಾಗ ಗಣನೀಯವಾಗಿ ದೊಡ್ಡದಾಗುತ್ತದೆ.  ಲಾಲಾಗ್ರಂಥಿಗಳ ಪುನರುತ್ಪತ್ತಿ ಸಾಮಥ್ರ್ಯ ಹೆಚ್ಚು. ಪುನರುತ್ಪತ್ತಿಯಾದ ಅಂಗಾಂಶ ಮೊದಲಿನಂತೆಯೇ ಕೆಲಸ ನಿರ್ವಹಿಸಬಲ್ಲದು.  ಮೇದೋಜೀರಕ ಗ್ರಂಥಿ, ವೃಷಣ, ಮೂತ್ರಪಿಂಡ, ಮತ್ತು ಗುಲ್ಮಗಳಿಗೆ ಈ ಸಾಮಥ್ರ್ಯ ಹೆಚ್ಚು ಮನುಷ್ಯನ ಸಯಾಟಿಕ್ ನರ ದಿನವೊಂದಕ್ಕೆ 1.2 ಮಿಲಿಮೀಟರ್ ದರದಲ್ಲಿ ಬೆಳೆಯುತ್ತದೆ.  ಪುನರುತ್ಪತ್ತಿಯ ಜೊತೆಗೆ ಅತಿವೃದ್ಧಿಯೂ ಕೂಡಿರುತ್ತದೆ.  ಪ್ರಾಣಿಯ ಒಂದು ವೃಷಣವನ್ನು ತೆಗೆದುಹಾಕಿದರೆ ಮತ್ತೊಂದು ಹಿಗ್ಗುತ್ತದೆ.  
ಉಗುರು, ಕೂದಲು, ಚರ್ಮ, ರಕ್ತಕಣಗಳು, ಕರುಳು ಮತ್ತು ಗರ್ಭಕೋಶದ ಅನುಲೇಪನ ಅಂಗಾಂಶ ಮುಂತಾದುವು ಕಾಲಕಾಲಕ್ಕೆ ನವೀಕರಣಗೊಳ್ಳುವುವು. ಇದಕ್ಕೆ ಶಾರೀರಿಕ ಪುನರುತ್ಪತ್ತಿ ಎಂದು ಹೆಸರು. ಸಾರಂಗದ ಕೊಂಬುಗಳು ಉದುರಿ ವರ್ಷಕ್ಕೊಮ್ಮೆ ಹೊಸ ಕೊಂಬುಗಳು ಮೂಡುತ್ತವೆ.  ಪ್ರತಿದಿನ ಹಳೆಯ ಕೆಂಪು ರಕ್ತ ಕಣಗಳು ನಾಶವಾಗಿ ಹೊಸ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.  ಪುನರುತ್ಪತ್ತಿ ಮೇಲ್ಮಟ್ಟದ ಜೀವಿಗಳಿಗಿಂತ ಕೆಳಮಟ್ಟದ ಜೀವಿಗಳಲ್ಲಿ ಹೆಚ್ಚು.  

ಗಾಯಗೊಂಡ ಸ್ಥಳದಲ್ಲಿ ಅಪ್ರಬುದ್ಧ ಜೀವಕೋಶಗಳ ಒಂದು ಮೊಗ್ಗು ಮೂಡಿ (ಬ್ಲಾಸ್ಟಿಮ),  ಒಂದು ಜೀವಿ ಇಲ್ಲವೇ ಒಂದು ಅಂಗವಾಗಿ ಪುನರುತ್ಪತ್ತಿಯಾಗುತ್ತದೆ.  ಪುನರುತ್ಪತ್ತಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಒಂದು ರೀತಿಯ ಪುನರ್ನವೀಕರಣ.  ಪೂರ್ಣವಾಗಿ ಬೆಳೆದ ಜೀವಿಗಳಲ್ಲಿ ಬೆಳವಣಿಗೆಯ ತಡೆಯನ್ನು ದೇಹದ ವಿವಿಧ ಅಂಗಗಳ ಸಮತೋಲ ಎಂದು ಭಾವಿಸುವುದಾದರೆ ಕತ್ತರಿಸುವಿಕೆ ಈ ಸಮತೋಲನವನ್ನು ಕದಡಿ ಮರುಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ ಎನ್ನಬಹುದು.  ಅನೇಕ ವೇಳೆ ಪುನರುತ್ಪತ್ತಿಯಾದ ಅಂಗ ಮುಂಚಿನ ಅಂಗಕ್ಕಿಂತ ವಿಭಿನ್ನವಾಗಿರುವುದು ಸಾಧ್ಯ.  ಕೆಲವೊಮ್ಮೆ ಹೊಸ ಅಂಗವಾಗಿ ಬೆಳೆಯುವ ಜೀವಕೋಶಗಳು ದೇಹದ ಬೇರೆ ಭಾಗಗಳಿಂದ ಮೂಡುತ್ತವೆ.  ಹೊಸ ಸ್ನಾಯು ಮೊದಲಿದ್ದ ಸ್ನಾಯುವಿನಿಂದಾಗಲೀ, ಹೊಸ ಮೂಳೆ ಹಳೆಯ ಮೂಳೆಯಿಂದಾಗಲೀ ಹುಟ್ಟುವುದಿಲ್ಲ. ಟ್ರೈಟನಿನ ಕಣ್ಣಿನ ಮಸೂರವನ್ನು ತೆಗೆದರೆ ಪಾಪೆಯ ಜೀವಕೋಶಗಳಿಂದ ಹೊಸ ಮಸೂರ ಬೆಳೆಯುತ್ತದೆ.  ಅಂಗಭೇದ ದೊಡ್ಡದಾದಂತೆಲ್ಲ ಕಳಚಿದ ಭಾಗದ ಪುನರುತ್ಪತ್ತಿಯ ವೇಗ ಹೆಚ್ಚು.  ಉದಾಹರಣೆಗೆ ಒಂದು ಎರೆ ಹುಳದಲ್ಲಿ ಬಾಲವನ್ನು ಚಿಕ್ಕದಾಗಿ ಕತ್ತರಿಸಿ ಎರಡನೆಯ ಎರೆಹುಳದಲ್ಲಿ ಬಾಲವನ್ನು ದೊಡ್ಡದಾಗಿ ಕತ್ತರಿಸಿದರೆ, ಎರಡನೆಯ ಎರೆಹುಳದ ಬಾಲ ಶೀಘ್ರಗತಿಯಲ್ಲಿ ಪುನರುತ್ಪತ್ತಿಯಾಗುತ್ತದೆ.  ಮೇಲ್ಮಟ್ಟದ ಪ್ರಾಣಿಗಳಲ್ಲಿ ಗಾಯ ದೊಡ್ಡದಾದಂತೆಲ್ಲ ಮಾಯುವ ಗತಿ ಶೀಘ್ರ.  ಕಶೇರುಕಗಳಲ್ಲಿ ತೈರಾಯ್ಡ್ ಮತ್ತು ಪಿಟ್ಯುಟರಿ ಗ್ರಂಥಿಗಳಿಂದ ಉತ್ಪತ್ತಿಯಾದ ಪ್ರಚೋದಕ ಬೆಳವಣಿಗೆಗೆ ಸಹಕಾರಿಯಾಗಿರುವಂತೆ ಪುನರುತ್ಪತ್ತಿಗೂ ಸಹಾಯಕಾರಿ.  ಪುನರುತ್ಪತ್ತಿಯಲ್ಲಿ ನರಮಂಡಲ ಸಹ ಪ್ರಮುಖ ಪಾತ್ರ ವಹಿಸುತ್ತದೆ.  ಗ್ಯಾನೆಟ್ ಎಂಬಾತ ವಿವಿಧ ಮಟ್ಟದ ಪುನರುತ್ಪತ್ತಿ ಸಾಮಥ್ರ್ಯವುಳ್ಳ ವಲಯಗಳನ್ನು ಗುರುತಿಸಿದ. ಆತನ ದೃಷ್ಟಿಯಲ್ಲಿ ಟ್ರೈಟನ್ನಿನ ದೇಹ ಅದೃಶ್ಯ ಸೀಮಾರೇಖೆಗಳುಳ್ಳ ವಲಯಗಳಿಂದ ಕೂಡಿದೆ.  ಯಾವುದಾದರೊಂದು ವಲಯವನ್ನು ತೆಗೆದುಹಾಕಿದರೆ ಮಿಕ್ಕ ವಲಯಗಳಿಂದ ಪುನರುತ್ಪತ್ತಿ ಭಾಗ ಹುಟ್ಟಲಾರದು.  ಹೀಗಾಗಿ ಪ್ರಾಣಿ ತಾನು ಕಳೆದುಕೊಂಡ ಅಂಗವನ್ನು ಮತ್ತೆ ಪಡೆಯಲಾರದು.  ಒಂದು ವಲಯವನ್ನು ಮತ್ತೊಂದು ವಲಯಕ್ಕೆ ಸ್ಥಳಾಂತರಿಸಿದರೂ ಅದು ತನ್ನ ಮೊದಲಿನ ಗುಣವನ್ನೇ ಉಳಿಸಿಕೊಂಡಿರುತ್ತದೆ.  ಉದಾಹರಣೆಗೆ ಕಾಲಿನ ವಲಯವನ್ನು ಬಾಲಕ್ಕೆ ಕಸಿ ಮಾಡಿದರೆ, ಬಾಲದ ಮೇಲೆ ಒಂದು ಸಣ್ಣ ಕಾಲು ಬೆಳೆಯುತ್ತದೆ ; ಹಾಗೆಯೇ ಬಾಲದ ವಲಯವನ್ನು ಕಾಲಿಗೆ ಕಸಿ ಮಾಡಿದರೆ ಕಾಲಿನ ಮೇಲೆ ಒಂದು ಸಣ್ಣ ಬಾಲ ಬೆಳೆಯುತ್ತದೆ.  ಪ್ರತಿಯೊಂದು ವಲಯದ ನಿರ್ದಿಷ್ಟ ಗುಣವನ್ನು ಅಲ್ಲಿರುವ ಸಂಯೋಜಕ ಜೀವಕೋಶಗಳು ನಿರ್ಧರಿಸುತ್ತವೆ. ವಲಯಗಳು ಸ್ವತಂತ್ರವಾಗಿ ವಿಕಾಸಗೊಳ್ಳುತ್ತವೆ.  ಹೀಗಾಗಿ ಗೊದಮೊಟ್ಟೆಯಲ್ಲಿ ಕಾಲಿನ ವಲಯ ಪರಿವೃದ್ಧಿ ಸಮಯದಲ್ಲಿ ತನ್ನ ಪುನರುತ್ಪತ್ತಿ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತದೆ.  ಆದರೆ, ಅದೇ ಸಮಯದಲ್ಲಿ ಬಾಲದ ವಲಯದ ಪುನರುತ್ಪತ್ತಿ ಸಾಮಥ್ರ್ಯ ಇನ್ನೂ ಉಳಿದಿರುತ್ತದೆ.

ಕೆಲವು ಪ್ರಾಣಿಗಳಲ್ಲಿ ಪ್ರಮುಖವಾಗಿ ಫ್ಲನೇರಿಯಗಳಲ್ಲಿ ನಿಯೋಬ್ಲಾಸ್ಟುಗಳೆಂಬ ಪುನರುತ್ಪತ್ತಿ ಜೀವಕೋಶಗಳು ದೇಹದ ಎಲ್ಲ ಭಾಗಗಳಲ್ಲೂ ಹುಟ್ಟುತ್ತವೆ. ಈ ಅಂಶವನ್ನು ಫ್ರಾಂಕೋಯಿಸ್ ಡುಬಾಯ್ ತನ್ನ ಕುಶಲ ಪರಿಶೋಧನೆಗಳಿಂದ ಸಾದರಪಡಿಸಿದ. ಚಪ್ಪಟೆ ಹುಳದ ತಲೆಯನ್ನು ಕತ್ತರಿಸಿದರೆ ಪುನರುತ್ಪತ್ತಿ ತತ್‍ಕ್ಷಣ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಹೊಸ ತಲೆ ಹುಟ್ಟುತ್ತದೆ.  ಆದರೆ ಕತ್ತರಿಸುವ ಮೊದಲು ಪ್ರಾಣಿಯ ಮುಂಭಾಗವನ್ನು ಕಿರಣಗಳ ಪ್ರಭಾವಕ್ಕೆ ಒಳಪಡಿಸಿದರೆ, ಪುನರುತ್ಪತ್ತಿ ಒಂದು ತಿಂಗಳಿಗೂ ಹೆಚ್ಚು ಕಾಲದಷ್ಟು ಮುಂದೂಡಲ್ಪಡುತ್ತದೆ. ಕಿರಣಗಳ ಪ್ರಭಾವಕ್ಕೆ ಒಳಗಾದ ಜೀವಕೋಶಗಳು ಮುಂಭಾಗಕ್ಕೆ ಸರಿದು ಪುನರುತ್ಪತ್ತಿ ಸಾಮಥ್ರ್ಯವನ್ನು ಕಳೆದುಕೊಳ್ಳುವುದೇ ಇದಕ್ಕೆ ಕಾರಣ.  ದೇಹದ ಹಿಂಬದಿಯಲ್ಲಿರುವ ಜೀವಕೋಶಗಳು ಮುಂಭಾಗಕ್ಕೆ ಸರಿದು ಹೊಸತಲೆಯನ್ನು ಪುನರುತ್ಪತ್ತಿ ಮಾಡಲು ಸಾಕಷ್ಟು ಸಮಯ ಬೇಕು. ಇಂಥ ಸಂಚಾರಿ ಜೀವಕೋಶಗಳಿಂದ ತಲೆಯ ಪುನರುತ್ಪತ್ತಿಯಾಗುತ್ತದೆ.  ಇದನ್ನು ಸಂಚಾರಿ ದುರಸ್ತಿ ಎನ್ನಬಹುದು.  ಪಾಲಿಸಿಲಸ್ ನೈಗ್ರ ಎಂಬ ಚಪ್ಪಟೆ ಹುಳದಲ್ಲಿ ಕಣ್ಣಂಚಿನ ಒಂದು ಭಾಗವನ್ನು ಕತ್ತರಿಸಿದರೆ ಕಣ್ಣುಗಳು ಮತ್ತೆ ಬೆಳೆಯುತ್ತವೆ.  ಆದರೆ, ಮಿದುಳನ್ನು ತೆಗೆದುಹಾಕಿದರೆ ಕಣ್ಣುಗಳು ಮತ್ತೆ ಬೆಳೆಯಲಾರವು. ಅಂದರೆ ಮಿದುಳಿಗೆ ಕಣ್ಣುಗಳ ಪುನರುತ್ಪತ್ತಿಯನ್ನು ನಿಯಂತ್ರಿಸುವ ಸಾಮಥ್ರ್ಯ ಇದೆ ಎಂದಂತಾಯಿತು.  

ಪುನರುತ್ಪತ್ತಿಯಾದ ಅಂಗ ಅನೇಕ ವೇಳೆ ಮೊದಲಿನ ಅಂಗಕ್ಕಿಂತ ವಿಭಿನ್ನವಾಗಿರುವುದು.  ನಳ್ಳಿ ಮತ್ತು ಸೀಗಡಿಗಳಲ್ಲಿ ಕಣ್ಣಿನ ತೊಟ್ಟನ್ನು ಬುಡದಲ್ಲಿ ಕತ್ತರಿಸಿದರೆ ಕಣ್ಣಿಗೆ ಬದಲಾಗಿ ಆಂಟೆನ ಮಾತ್ರ ಬೆಳೆಯುತ್ತದೆ. ಕತ್ತರಿಸಿದಾಗ ಕಣ್ಣಿವ ನರ ಗಂಟು ಉಳಿದಿದ್ದರೆ ಮಾತ್ರ ಕಣ್ಣಿನ ಪುನರುತ್ಪತ್ತಿ ಸಾಧ್ಯವಾಗುವುದು. ಈ ಕ್ರಿಯೆಯನ್ನು ಮೊದಲ ಬಾರಿಗೆ ಗಮನಿಸಿದವ ಹರ್ಬಸ್ಟ್. ಪಾಸ್‍ಮಿಡ್ ಗುಂಪಿನ ಕೆಲವು ಕೀಟಗಳಲ್ಲಿ ಆಂಟೆನವನ್ನು ಬುಡದಲ್ಲಿ ಕತ್ತರಿಸಿದರೆ ಒಂದು ಸಣ್ಣ ಕಾಲು ಬೆಳೆಯುತ್ತದೆ. ಆದರೆ ತುದಿಯಲ್ಲಿ ಕತ್ತರಿಸಿದರೆ ಮಾತ್ರ ಆಂಟೆನ ಮತ್ತೆ ಬೆಳೆಯುತ್ತದೆ.  ಟ್ರೈಟನ್ನಿನಲ್ಲಿ ಪುನರುತ್ಪತ್ತಿಯಾದ ಕಾಲುಗಳಲ್ಲಿ ಅನೇಕ ವೇಳೆ ಹೆಚ್ಚು ಬೆರಳುಗಳಿರುವುದುಂಟು. ಹಲ್ಲಿಯ ಬಾಲವನ್ನು ಕತ್ತರಿಸಿದಾಗ ಕೆಲವು ವೇಳೆ ಎರಡು ಅಥವಾ ಮೂರು ಬಾಲಗಳು ಪುನರುತ್ಪತ್ತಿಯಾಗುವುದು ಸಾಧ್ಯ. ಎರೆಹುಳದಲ್ಲಿ ದೊಡ್ಡದೊಡ್ಡ ಭಾಗಗಳನ್ನು ಕತ್ತರಿಸುತ್ತ ಹೋದಂತೆಲ್ಲ ಪುನರುತ್ಪತ್ತಿಯ ಕ್ರಮಬದ್ಧತೆ ಕೆಡುತ್ತದೆ. ಕತ್ತರಿಸಿ ಹೋದ ದೊಡ್ಡ ಭಾಗಕ್ಕೆ ಬದಲಾಗಿ ಉಳಿದ ಚಿಕ್ಕ ತುಂಡು ದ್ವಿಗುಣಗೊಂಡು ಸಂಕೀರ್ಣ ದೈತ್ಯವಾಗುವುದು ಸಾಧ್ಯ ; ಆದರೆ ಇದು ಜೀವಂತ ಉಳಿಯುವುದಿಲ್ಲ.  ಎರಹುಳದ ಮುಂಭಾಗದ ಒಂದು ನಾಣ್ಯ ತುದಿಯನ್ನು ಕತ್ತರಿಸಿದೆ, ಈ ಚಿಕ್ಕ ಮುಂತುದಿ ಮಿಕ್ಕ ಭಾಗವನ್ನು ಪುನರುತ್ಪತ್ತಿ ಮಾಡಿಕೊಳ್ಳುವುದಕ್ಕೆ ಬದಲು ವಿರುದ್ಧ ದಿಕ್ಕಿಗೆ ತಿರುಗಿದ ಇನ್ನೊಂದು ತಲೆಯನ್ನು ಬೆಳೆಸಿಕೊಳ್ಳುತ್ತದೆ. ಹಾಗೆಯೇ ಹುಳದ ಹಿಂತುದಿಯನ್ನು ಕತ್ತರಿಸಿದರೆ ಈ ಸಣ್ಣ ಭಾಗದಲ್ಲಿ ಎರಡನೆಯ ಬಾಲ ಬೆಳೆಯುತ್ತದೆ. ಪ್ರೊಸಿರೋಡಿಸ್ ಲೋಬೇಟವನ್ನು ಕಣ್ಣುಗಳ ಹಿಂಭಾಗದಲ್ಲಿ ಕತ್ತರಿಸಿದರೆ ಮತ್ತೊಂದು ತಲೆ ಬೆಳೆಯುತ್ತದೆ. ಆದರೆ, ಇದೇ ಜೀವಿಯ ದೇಹವನ್ನು ಇನ್ನೂ ಹಿಂಭಾಗಕ್ಕೆ ಕತ್ತರಿಸುತ್ತ ಹೋದಂತೆ ಅಕ್ರಮ ಬೆಳವಣಿಗೆಗಳು ಕಮ್ಮಿಯಾಗುತ್ತ ಹೋಗಿ ಒಂದು ಘಟ್ಟದಲ್ಲಿ ಸಂಪೂರ್ಣವಾಗಿ ಮರೆಯಾಗುತ್ತವೆ, ಕತ್ತರಿಸುವಿಕೆ ಬಾಲದ ಹತ್ತಿರಕ್ಕೆ ಬಂದಂತೆಲ್ಲ ಪುನರುತ್ಪತ್ತಿ ಕ್ರಮಬದ್ಧವಾಗಿರುತ್ತದೆ. ಹಿಂತುದಿಯನ್ನು ಕತ್ತರಿಸಿದಾಗ ಬಾಲ ಕ್ರಮಬದ್ಧವಾಗಿ ಪುನರುತ್ಪತ್ತಿಯಾಗುತ್ತದೆ.
  
ದೇಹದ ಎಲ್ಲ ಭಾಗಗಳಿಗೂ ಒಂದೇ ರೀತಿಯ ಪುನರುತ್ಪತ್ತಿ ಸಾಮಥ್ರ್ಯ ಇರುವುದಿಲ್ಲ.  ಕೆಲವು ವೇಳೆ ತದ್ವಿರುದ್ಧ ಅಂಗಗಳು ಬೆಳೆದರೂ ಸಾಮಾನ್ಯವಾಗಿ ಮುಂತುದಿ ಹಾಗೂ ಹಿಂತುದಿಗಳು ಅನುಕ್ರಮವಾಗಿ ತಲೆ ಮತ್ತು ಬಾಲವನ್ನು ಪುನರುತ್ಪತ್ತಿ ಮಾಡಿಕೊಳ್ಳಬಲ್ಲವು.  ಇಷ್ಟಾದರೂ ಜೀವಿಯ ಮೊದಲನೇ ಸಮಗ್ರತೆಯನ್ನು ಉಳಿಸುವುದು ಪುನರುತ್ಪತ್ತಿಗೆ ಸಾಧ್ಯವಿಲ್ಲ.  ಪುನರುತ್ಪತ್ತಿ ಕ್ರಿಯೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಲ್ಲ.						(ಎ.ಎಸ್.ಸಿ.)

ಪುನರುತ್ಪತ್ತಿಯನ್ನು ಸಸ್ಯಗಳಲ್ಲೂ ಕಾಣಬಹುದು. ಉದಾಹರಣೆಗೆ ಒಂದು ಸಸ್ಯದ ಕಾಂಡದ ತುಂಡನ್ನು ತೇವವಿರುವ ಮಣ್ಣಿನಲ್ಲಿ ಊರಿದರೆ, ಇಲ್ಲವೇ ತೇವಪೂರಿತ ವಾತಾವರಣಕ್ಕೆ ಒಡ್ಡಿದರೆ ಆಗ ಕಾಂಡದ ಕೆಳತುದಿಯನ್ನು ಹೊಸ ಬೇರುಗಳು ಹುಟ್ಟಿಕೊಳ್ಳುವುವು. ಜಿರೇನಿಯಮ್, ಕೋಲಿಯಸ್, ಗುಲಾಬಿ ಇಯಾದಿ ಉದ್ಯಾನಸಸ್ಯಗಳನ್ನು ಶೀಘ್ರಗತಿಯಲ್ಲಿ ವೃದ್ಧಿಗೊಳಿಸುವಾಗ ಈ ಕ್ರಮವನ್ನು ಅನುಸರಿಸುವುದುಂಟು.  ಇದಕ್ಕೆ ವಾಣಿಜ್ಯ ಮಹತ್ವವೂ ಇದೆ.  
ಎಲೆಗಳಿಂದಲೂ ಬೇರುಗಳನ್ನು ಉತ್ಪಾದಿಸಿ, ಪುನರುತ್ಪತ್ತಿ ಕಾರ್ಯವನ್ನು ಸಾಧಿಸಬಹುದು.  ಕೆಲವೊಂದು ಸಸ್ಯಗಳ (ಉದಾ ಆಫ್ರಿಕನ್ ವಯೊಲೆಟ್) ಎಲೆಯನ್ನು ಗಿಡದಿಂದ ಬೇರ್ಪಡಿಸಿ ತೇವಯುತ ಮರಳು ಇಲ್ಲವೇ ಮಣ್ಣಿನಲ್ಲಿ ಇಟ್ಟರೆ ಪತ್ರವೃಂತದ ಕೆಳಭಾಗದಿಂದ ಹೊಸ ಕಾಂಡ ಮತ್ತು ಎಲೆಗಳು ಹುಟ್ಟಿಕೊಳ್ಳುವುದನ್ನು ಕಾಣಬಹುದು.  ಬಿಗೋನಿಯ ಮತ್ತಿತರ ಸಸ್ಯಗಳನ್ನೂ ಹೀಗೆಯೇ ಬೆಳೆಸಬಹುದು.

ಕೆಲವೊಂದು ಸಸ್ಯಗಳ ಬೇರುಗಳಿಗೂ ಪುನರುತ್ಪತ್ತಿ ಸಾಮಥ್ರ್ಯ ಇರುತ್ತದೆ.  ಉದಾಹರಣೆಗೆ ಒಂದು ಸಜೀವ ಮರವನ್ನು ಭೂಮಟ್ಟಕ್ಕೆ ಕಡಿದುಹಾಕಿದರೆ, ಕೆಲಕಾಲದ ಅನಂತರ ಆ ಮರದ ಬೇರುಗಳಿಂದ ಒಂದು ಅಥವಾ ಹೆಚ್ಚು ಕಾಂಡಗಳು ಮೇಲಕ್ಕೆ ಬೆಳೆಯುತ್ತ ಬರುವುದನ್ನು ಕಾಣಬಹುದು.  ಅಂತೆಯೇ ಬೇರಿನ ತುದಿಯಲ್ಲಿರುವ ವೃದ್ಧಿಶೀಲ ಭಾಗವನ್ನು ಘಾಸಿಗೊಳಿಸದೆ ಬೇರ್ಪಡಿಸಿ, ಅದನ್ನು ಸೂಕ್ತ ಸನ್ನಿವೇಶದಲ್ಲಿ ಇಟ್ಟು ಬೆಳೆಸುವುದಾದರೆ, ಅದರಿಂದ ಹೊಸ ಸಸ್ಯ ಭಾಗಗಳು ಹುಟ್ಟಿಕೊಳ್ಳಬಲ್ಲವು. ಜೊತೆಗೆ ಆ ಮೂಲ ಸಸ್ಯದ ಬೇರಿನಲ್ಲಿಯೇ ಗಾಯವಾದ ಪರಿಣಾಮದಿಂದ ಅನತಿ ದೂರದಲ್ಲಿ ಮತ್ತೊಂದು ವೃದ್ಧಿಶೀಲ ಬೇರು ಸ್ಥಾಪನೆಗೊಂಡಂತಾಗಿ, ಅದರಿಂದ ಹೊಸ ಭಾಗಗಳು ಪುನಃ ಹುಟ್ಟಿಕೊಳ್ಳುತ್ತವೆ.  

ಇಂಥ ವರ್ತನೆಯನ್ನೇ ಕಾಂಡದ ತುದಿಭಾಗದಲ್ಲಿರುವ ಬೆಳವಣಿಗೆ ಬಿಂದುಗಳಲ್ಲಿಯೂ ಕಾಣಬಹುದು. ಕೆಲ ಸಸ್ಯಗಳಲ್ಲಿ ಬೆಳೆಯುವ ಆಗಂತುಕ ಮೊಗ್ಗುಗಳು (ಅಡ್ವೆಂಟಿಷಸ್ ಬಡ್ಸ್) ಕೂಡ ಪುನರುತ್ಪತ್ತಿಗೆ ಸೂಕ್ತ ನಿದರ್ಶನಗಳಾಗುತ್ತವೆ.

ಸಾಮಾನ್ಯವಾಗಿ, ತುಂಡರಿಸಿದ ಇಲ್ಲವೆ ಗಾಯಗೊಂಡ ಸಸ್ಯಾಂಗದ ಮೇಲೆ ಕಂಡು ಬರುವ ಪುನರುತ್ಪತ್ತಿಯ ಮೊಟ್ಟಮೊದಲ ಸೂಚನೆ ಎಂದರೆ ಬಿಳಿ ಬಣ್ಣದ, ತೆಳು ಕೋಶ ಭಿತ್ತಿಯುಳ್ಳ. ಅತಿ ಹೆಚ್ಚು ಜೈವಿಕ ಕ್ರಿಯಾಚಟುವಟಿಕೆಯುಳ್ಳ ಕೋಶಗಳ ಸಮೂಹ ಕಾಣಿಸಿಕೊಳ್ಳುವುದು. ಇದಕ್ಕೆ ಕ್ಯಾಲಸ್ ಎಂದು ಹೆಸರು. ಕಾಂಡದಲ್ಲಿ ಈ ಕ್ಯಾಲಸ್ ಕೋಶಸಮೂಹಗಳು ಕ್ಲೈಲಮ್ ಮತ್ತು ತೊಗಟೆಯ ಭಾಗದ ಕೆಲವು ಸಜೀವ ಕೋಶಗಳಿಂದ ವಿಶೇಷತಃ ನಾಳಮಯ ಕೋಶಗಳ ಭಾಗದಿಂದ ಉತ್ಪನ್ನವಾಗುವುದು ಹೆಚ್ಚು.  ಕ್ಯಾಲಸ್ ಕೋಶಗಳಿಂದ ಮುಂದೆ ಹೊಸಹೊಸ ವರ್ಧನಶೀಲ ಕೋಶ ಸಮೂಹಗಳು ಹುಟ್ಟುತ್ತವೆ.  ಅನಂತರ ಇವು ಪುನರುತ್ಪತ್ತಿ ಸಾಮಥ್ರ್ಯವುಳ್ಳ ಕೋಶಗಳಾಗಿ ಅಥವಾ ಅಂಗಗಳಾಗಿ ಬೆಳೆಯುತ್ತವೆ.  

ಪುನರುತ್ಪತ್ತಿ ಕಾರ್ಯ ಅನೇಕ ಕಾರಕಗಳನ್ನು ಅವಲಂಬಿಸಿದೆ.  ಇವುಗಳೆಲ್ಲದರ ಸಂಕೀರ್ಣ ಹಾಗೂ ಸಮಗ್ರ ಪರಿಣಾಮವೇ ಪುನರುತ್ಪತ್ತಿ ಕ್ರಿಯೆಯಲ್ಲಿ ಪರ್ಯವಸಾನವಾಗುತ್ತದೆ. ಸಸ್ಯಾಂಗದಲ್ಲಿ ಸಾಕಷ್ಟು ಆಹಾರದ ಲಭ್ಯತೆ ಇದ್ದಾಗ ಇಲ್ಲವೇ ಸಾಕಷ್ಟು ಕ್ರಿಯಾಶೀಲ ಹಾಗೂ ದ್ಯುತಿಸಂಶ್ಲೇಷಣ ಸಾಮಥ್ರ್ಯವಿರುವ ಕೋಶಗಳಿದ್ದಾಗ ಮಾತ್ರವೇ ಇದು ಸಾಧ್ಯ.  ಏಕೆಂದರೆ, ಹೊಸ ಹೊಸ ಕೋಶಗಳ ಮತ್ತು ಅಂಗಗಳ ನಿರ್ಮಾಣಕ್ಕೆ ಸಾಕಷ್ಟು ಶಕ್ತಿ ಮತ್ತು ನಿರ್ಮಾಣ ಸಾಮಗ್ರಿಗಳು ಅಂದರೆ ಶರ್ಕರಗಳು ಪ್ರೋಟೀನುಗಳು ಅಗತ್ಯ.  ಎರಡನೆಯದಾಗಿ ಪುನರುತ್ಪತ್ತಿ ಕ್ರಿಯೆಗೆ ಸದಾ ಸಾಕಷ್ಟು ನೀರಿನ ಪೂರೈಕೆಯಾಗುತ್ತಿರಬೇಕು.  ಇಲ್ಲದಿದ್ದರೆ ತುಂಡಾದ ಇಲ್ಲವೇ ಘಾಸಿಗೊಳಿಸಿದ ಕಾಂಡ ಅಥವಾ ಪತ್ರವೃಂತದ ಭಾಗಗಳ ಮೇಲಿನ ಜಲಾಂಶ ಆರಿಹೋಗಿ, ಶುಷ್ಕವಾಗುತ್ತ ಹೋಗಬಹುದು.  ತತ್ಪರಿಣಾಮವಾಗಿ ಪುನರುತ್ಪತ್ತಿ ಕಾರ್ಯ ಸಮರ್ಪಕವಾಗಿ ಸಾಗದೆ ಹೋಗಬಹುದು. ಇದರ ಜೊತೆಗೆ, ಪುನರುತ್ಪತ್ತಿ ಕ್ರಿಯೆ ಸಾಗಬೇಕಾದರೆ, ಸಾಕಷ್ಟು ಪ್ರಮಾಣದಲ್ಲಿ ಆಕ್ಸಿನ್ ಎಂಬ ಹಾರ್ಮೋನು ಅವಶ್ಯ. ಏಕೆಂದರೆ ಹೊಸ ಕೋಶ ಮತ್ತು ಅಂಗಗಳ ನಿರ್ಮಾಣ ಕಾರ್ಯದಲ್ಲಿ ಆಕ್ಸಿನ್ ಕೋಶ ನಿರ್ಮಾಣ ಹಾಗೂ ಬೆಳವಣಿಗೆ ಕಾರ್ಯವನ್ನು ಆರಂಭಗೊಳಿಸುವುದಲ್ಲದೆ, ಅದನ್ನು ನಿರ್ದೇಶಿಸಿ ನಿಯಂತ್ರಿಸುತ್ತ ಹೋಗುತ್ತದೆ.
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ